ನೂತನ ಅಕಾಡೆಮಿ-
	ಪ್ಲೇಟೋ ಎಂಬ ಗ್ರೀಕ್ ತತ್ತ್ವಜ್ಞಾನಿ ಅಥೆನ್ಸ್ ನಗರದ ಹೊರವಲಯದಲ್ಲಿ ಪ್ರಾರಂಭಿಸಿದ ತತ್ತ್ವಚಿಂತಕರ ಅಕಾಡೆಮಿ ವಿದ್ಯಾಸಂಸ್ಥೆ. ಅವನ ಅನಂತರ ಅವನ ಶಿಷ್ಯಪರಂಪರೆಯಿಂದ ಕ್ರಿ.ಶ. 270ರವರೆಗೆ ಒಂದು ರೀತಿ ನಡೆದು ಬಂತು. ಅಷ್ಟು ಕಾಲವೂ ಅಕಾಡೆಮಿ ಪ್ಲೇಟೋ ಮತ್ತು ಪಿತ್ಯಾಗರಸ್ ಅವರ ಚಿಂತನೆಯನ್ನೇ ವಿವೇಚಿಸುತ್ತಿದ್ದುದರಿಂದ ಆ ಕಾಲಾವಧಿಯವರೆಗಿನ ಅಕಾಡೆಮಿಯನ್ನು ಪ್ರಾಚೀನವೆನ್ನುವ ವಾಡಿಕೆಯಿದೆ. ಈ ಪರಂಪರೆಯಲ್ಲಿ ಕಡೆಗೆ ಬಂದ ಫಿಲೋ, ಆಸ್ಟಿಯೋಕಸ್, ಸಿಸಿರೋಗಳ ವೇಳೆಗೆ ಪ್ಲೇಟೋನ ತತ್ತ್ವಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದವು. ಸಿಸಿರೋ ರೋಮನ್ ಜನರಲ್ಲಿ ಸಂಭಾವ್ಯತತ್ತ್ವಗಳ ಮೀಮಾಂಸೆಯನ್ನು ವಿಸ್ತರಿಸಿದವನೆನ್ನಬಹುದು. ಈತನ ವಿಚಾರ ಧಾರೆಯಿಂದಾಗಿ ಪ್ರಾಚೀನ ಅಕಾಡೆಮಿ ನೂತನ ಅಕಾಡೆಮಿಯಾಯಿತು.

	ಸ್ಪ್ಯೂಸಿಸ್ಪಸ್ ಮತ್ತು ಕ್ಸೆನೋಕ್ರೆಟೀಸ್ ಅವರ ಕಾಲದ (ಕ್ರಿ.ಪೂ. 396-314) ಅಕಾಡೆಮಿಯನ್ನು ಪ್ರಾಚೀನವೆಂದೂ ಆರ್ಸೇಸಿಲಾಸ್ ಮತ್ತು ಪೊಲೆಮನ್ನರವರೆಗಿನ ಕಾಲಾವಧಿಯನ್ನು (ಕ್ರಿ.ಪೂ. 316-241) ಮಧ್ಯಕಾಲೀನ ಎಂದೂ ಮೂರನೆಯದಾಗಿದ್ದ ಕಾರ್ನೇಡಿಸ್, ಕ್ಲಿಟೋಮ್ಯಾಕಸ್ ಅವರ ಕಾಲಾವಧಿಯನ್ನು (ಕ್ರಿ.ಪೂ. 214-129) ನೂತನ ಅಕಾಡೆಮಿಯೆಂದು ಕೆಲವರು ವ್ಯವಹರಿಸುತ್ತಿದ್ದರು. ಇವಲ್ಲದೆ ಲಾರಿಸಾದ ಫಿಲೋ (ಕ್ರಿ.ಪೂ. 150-80) ಎಂಬವನ ಮತ್ತು ಅಂಟಿಯೋಕಸನ (ಕ್ರಿ.ಪೂ. 130-79) ಇತರ ಅಕಾಡೆಮಿಗಳು ಇದ್ದವು. ಇನ್ನೊಬ್ಬ ಲೇಖಕನಾದ ಡಯ್ಯುಜನೀಸ್ ಲೇರ್ಟಿಯಸ್ಸನ ಪ್ರಕಾರ ನೂತನ ಅಕಾಡೆಮಿಯ ಸಂಸ್ಥಾಪಕನ ಹೆಸರು ಲೇಸಿಡಸ್. ಮೊದಲು ಹೇಳಿದ ಫಿಲೋ ಎಂಬಾತ ಸಿಸಿರೋನ ಗುರುವಾಗಿದ್ದ.

	ಅಕಾಡೆಮಿಯ ಬಗ್ಗೆ ಸಿಸಿರೋ ಹೀಗೆ ಬರೆದಿದ್ದಾನೆ: `ಅಕಾಡೆಮಿಯವರ ಲೇಖನಗಳು ಮಾನವಿಕ ವಿದ್ಯೆಗಳೆಲ್ಲವನ್ನೂ ಎಲ್ಲ ಇತಿಹಾಸ ಸಂಸ್ಕøತಿಗಳನ್ನೂ ಒಳಗೊಂಡಿವೆ. ಎಲ್ಲ ಕಲೆಗಳ ನಾನಾಮುಖಗಳನ್ನೂ ಒಳಗೊಂಡಿವೆ. ಆದ್ದರಿಂದ ಅವುಗಳನ್ನು ಅರಿಯದವ ಯಾವ ಜೀವನ ಕ್ಷೇತ್ರದಲ್ಲಿಯೂ ಯಶಸ್ಸನ್ನು ಗಳಿಸಲಾರ. ಪ್ರತಿಯೊಬ್ಬ ಕಲೆಗಾರನಿಗೂ ಅಕಾಡೆಮಿ ಒಂದು ಪ್ರಯೋಗಾಲಯವೇ ಎನ್ನಬಹುದು. ಪ್ಲೇಟೋ ಆದಮೇಲೆ ಬಂದ ಲೇಖಕರು ಹೆಚ್ಚು ಹೆಚ್ಚಾಗಿ ವೈಜ್ಞಾನಿಕ ಸಂಶೋಧನೆಗೆ ಗಮನವಿತ್ತುದೇನೋ ನಿಜವೆಂದರೂ ಪ್ಲೇಟೋನ ತತ್ತ್ವಚಿಂತನೆಯ ಉನ್ನತ ಶಿಖರಗಳಿಂದ ಅವರು ದೂರವೇ ಉಳಿದಿದ್ದರೆನ್ನಬೇಕು. ತತ್ತ್ವಶಾಸ್ತ್ರದ ಪ್ರಾಪಂಚಿಕ ಪ್ರಶ್ನೆಗಳ ಕಡೆಗೆ ಮಾತ್ರ ಅವರ ಗಮನ ಹೆಚ್ಚಾಗಿ ಬಿದ್ದಿತ್ತು. ಪ್ಲೇಟೋನ ಪ್ರತಿಭೆಯಾಗಲಿ ಚಿಂತನಪ್ರಭೆಯಾಗಲಿ, ಅವನ ಕಾವ್ಯಗುಣವಾಗಲಿ, ಸ್ಫೂರ್ತಿಯಾಗಲಿ ಒಂದೂ ಈ ಮುಂದಿನವರಲ್ಲಿ ಎದ್ದು ಕಾಣಿಸದು. ಪ್ಲೇಟೋನಿಂದ ಮುಂದೆ ಇವರಿಟ್ಟ ಹೆಜ್ಜೆ ಏನೆಂಬುದು ಎಷ್ಟೋ ಸಂಶೋಧಕರ ಪರಿಶ್ರಮದ ಬಳಿಕವೂ ಸ್ಪಷ್ಟವಾಗುವಂತಿಲ್ಲ. ನೂತನ ಅಕಾಡೆಮಿಯವರ ತತ್ತ್ವ ವಿಕಾಸವನ್ನು ಕೆಳಗಿನಂತೆ ನಾಲ್ಕು ಶೀರ್ಷಿಕೆಗಳ ಕೆಳಗೆ ವರ್ಗೀಕರಿಸಬಹುದಾಗಿದೆ:

ಪ್ಲೇಟೋ ಹೇಳಿದ ಅತೀತ ತತ್ತ್ವಗಳನ್ನು ಅವನ ತರುವಾಯದವರೇ ಆದ ಸ್ಯೂಸಿಸ್ಪಸ್ ಮತ್ತು ಕ್ರೆನೊಕ್ರೆಟೀಸರೇ ಅಂಗೀಕರಿಸಲಿಲ್ಲ. ಎಲ್ಲ ವಸ್ತುಗಳ ಮೂಲ ಕಾರಣವಾಗಿ ಅಪಾರ ವಾದ ಬೆಳೆದಿತ್ತು. ಆದ್ದರಿಂದ ಶಿವತತ್ತ್ವ ಮತ್ತೊಂದು ಮೂಲತತ್ತ್ವಕ್ಕೆ ಅಧೀನವೇ ಇರಬೇಕೆಂದು ಅವರ ತರ್ಕ. ಆ ಪರಮಮೂಲತತ್ತ್ವ ಪಿತ್ಯಾಗರಸ್ ಹೇಳಿದ ಸಂಖ್ಯಾತತ್ತ್ವವೆಂದೇ ಸ್ಯೂಸಿಸ್ಪಸ್ ಬಗೆದ. ಆದ್ದರಿಂದ ಆತ ಸಂಖ್ಯಾತತ್ತ್ವ, ಪರಮಾಣುತತ್ತ್ವ, ಆಧ್ಯಾತ್ಮತತ್ತ್ವಗಳನ್ನು ಸಾಧಿಸಿದ. ಸರ್ವೇಶ್ವರನೂ ಸರ್ವಾಂತರ್ಯಾಮಿಯೂ ಆದವನೇ ದೇವತೆಯೆಂದು ನಿರ್ಣಯಿಸಿದ. ಆದರೆ ಕ್ರೆನೊಕ್ರೆಟೀಸ್, ತತ್ತ್ವಗಳನ್ನು- ಇಂದ್ರಿಯ ಗೋಚರ, ಬುದ್ಧಿಗೋಚರ, ಇಂದ್ರಿಯ ಬುದ್ಧಿಗಳೆರಡಕ್ಕೂ ಗೋಚರ-ಎಂದು ಮೂರು ರೀತಿಯಾಗಿ ಹೇಳಿ ಪ್ಲೇಟೋನನ್ನು ಮತ್ತಷ್ಟು ಅನುಸರಿಸಿದನು.

ಆರ್ಸೇಸಿಲಾಸನವರೆಗೂ ಅಕಾಡೆಮಿ ಸಕಲ ವಸ್ತುಗಳಲ್ಲೂ ಅನುಸ್ಯೂತವಾಗಿರುವ ಒಂದು ಐಕ್ಯವನ್ನು ಸ್ವೀಕರಿಸಿತ್ತು. ಅದರ ಮೇಲಿಂದ ಒಂದು ಸತ್ಯಸೂತ್ರವನ್ನು ಸಂಶೋಧಿಸಬಹುದೆಂದೂ ಅವರ ನಂಬಿಕೆ. ಆದರೆ ಆರ್ಸೇಸಿಲಾಸ್ ಮಾತ್ರ ಈ ನಿಶ್ಚಯ ಜ್ಞಾನವನ್ನೇ ನಿರಾಕರಿಸಿ ತನ್ನದೆ ಆದ ನೂತನ ವಿಚಾರಧಾರೆಗೆ ಅವಕಾಶ ಮಾಡಿಕೊಂಡ. ನಾನು ಅಜ್ಞಾನಿಯೆಂದಿಷ್ಟನ್ನು ಮಾತ್ರ ನಾನು ಬಲ್ಲೆ ಎಂದು ಸಾಕ್ರಟೀಸ್ ಹೇಳುತ್ತಿದ್ದನಷ್ಟೆ. ನಾನು ಅಜ್ಞಾನಿಯೋ ಅಲ್ಲವೋ ಎಂಬುದನ್ನು ಕೂಡ ನಾನು ಅರಿಯಲಾರೆ ಎಂಬುದು ಆರ್ಸೇಸಿಲಾಸನ ಸಿದ್ಧಾಂತ. ಹೀಗಾಗಿ ಪ್ಲೇಟೋನ ಆದರ್ಶವಾದದ ಧ್ರುವವನ್ನು ದೂರ ಬಿಟ್ಟು ಅದರ ವಿರುದ್ಧವಾದ ನಾಸ್ತಿಕವಾದದವರೆಗೆ ಚಿಂತನೆ ಸರಿಯಿತು.

ಕಾರ್ನೇಡಿಸನ ವಾದ ಇದಕ್ಕಿಂತ ಮೃದುವಾದ ನಾಸ್ತಿಕತೆಯೆನ್ನಬಹುದು. ಸ್ಟೋಯಿಕ್ ತತ್ತ್ವವಾದಿಗಳು ವಿಜ್ಞೇಯ ವಸ್ತುವಾದವನ್ನು ಹೇಳುತ್ತಿದ್ದುದರ ಬದಲಾಗಿ ಈತ ಅವಿಜ್ಞೇಯ ವಸ್ತುವಾದವನ್ನು ಮುಂದೆ ಮಾಡಿದ. ಅವರಂತೆ ಪ್ರತ್ಯಕ್ಷಾನುಭವಕ್ಕೂ ವಸ್ತು ಸ್ವರೂಪಕ್ಕೂ ನಿರ್ದಿಷ್ಟ ಸಂಬಂಧವಿದೆಯೆಂದು ಈತ ಒಪ್ಪುತ್ತಿರಲಿಲ್ಲ. ಆದರೆ ಜೀವನದಲ್ಲಿ ವ್ಯವಹಾರಕ್ಕೆ ಉಪಯುಕ್ತವಾಗುವಷ್ಟು ಸಂಭಾವ್ಯ ಸಂಬಂಧ ಅಥವಾ ಶಕ್ಯತೆಯಷ್ಟನ್ನು ಮಾತ್ರ ಸ್ವೀಕರಿಸಿದ್ದರಿಂದ ಇವನ ವಾದ ಪೂರ್ಣವಾಗಿ ನಾಸ್ತಿಕವಾದದಲ್ಲಿ ಪರ್ಯವಸಾನ ಹೊಂದಲಿಲ್ಲ.

ಈ ಕಡೆಯ ಕಾಲಾವಧಿಯಲ್ಲಿ ವಿಭಿನ್ನ ಮತಗಳೆಲ್ಲಕ್ಕೂ ಒಂದು ರೀತಿಯ ಸಮನ್ವಯ ಸಾಧಿಸುವ ಪ್ರಯತ್ನವನ್ನೂ ಇತರ ವಿಚಾರಧಾರೆಗಳೊಡನೆ ಸಾಮರಸ್ಯ ಕಲ್ಪಿಸುವ ಪ್ರವೃತ್ತಿಯನ್ನೂ ಅಕಾಡೆಮಿಯ ಸದಸ್ಯರಲ್ಲಿ ಕಾಣುತ್ತೇವೆ. ಕಾರ್ನೇಡಿಸ್ ಮತ್ತು ಪ್ಲೇಟೋಗಳಿಗೆ ನಿಜವಾಗಿ ಅಭಿಪ್ರಾಯ ಭೇದವಿಲ್ಲವೆಂದೂ ಫಿಲೋ ವ್ಯಾಖ್ಯಾನ ಮಾಡುತ್ತಾನೆ. ಪ್ಲೇಟೋ ಮತ್ತು ಸ್ಟೋಯಿಕ್ ಸಂಪ್ರದಾಯದ ಜೀನೋಗಳಿಗೆ ಕೂಡ ಕಾಣಬರುವ ವೈಷಮ್ಯ ಕೇವಲ ತೋರಿಕೆಯಷ್ಟೇ ಎಂದು ಅವರ ವಿಭಿನ್ನ ದೃಷ್ಟಿಕೋನಗಳನ್ನು ಸರಿಯಾಗಿ ಮನಗಂಡರೆ ಭಿನ್ನ ಮತಗಳಲ್ಲಿ ಅವಿರೋಧ ಕಾಣುವುದೆಂದೂ ಆತ ಸಾಧಿಸ ಹೊರಡುತ್ತಾನೆ. ಈ ಸಮನ್ವಯದ ಪರಿಣಾಮವಾಗಿ ಅಕಾಡೆಮಿಯ ಕಡೆಯ ಪ್ರತಿನಿಧಿಯಾದ ಸಿಸಿರೊನಲ್ಲಿ ನಾನಾ ತತ್ತ್ವಗಳ ಅಂಶಾಂಶ ಸ್ವೀಕಾರದ ಮೂಲಕ ಸಾಮಂಜಸ್ಯ ಕಲ್ಪನೆಯ ಹೊಸ ಪ್ರವೃತ್ತಿ ಉಗಮಿಸಿರುವುದನ್ನು ಕಾಣುತ್ತೇವೆ.							(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ